Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Vedamangala at Pajaka Vasudeva Gurukula

ಪಾಜಕದ ವಾಸುದೇವ ಗುರುಕುಲದಲ್ಲಿ ದಿನಾಂಕ ೧೭.೧೧.೨೦೧೧ರಂದು ವೇದಮಂಗಳ ಮಹೋತ್ಸವವು ಬಹಳ ಅದ್ಧೂರಿಯಾಗಿ ನಡೆಯಿತು. ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜಾನಂತರ ಪುಸ್ತಕ ಪೂಜೆ ಹಾಗೂ ಮಂಗಳ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯಮಠದ ಶ್ರೀಪಾದರೂ ಉಪಸ್ಥಿತರಿದ್ದರು. ಗುರುಕುಲದ ಪ್ರಾಂಶುಪಾಲರಾದ ಶ್ರೀಯುತ ನಂದಳಿಕೆ ವಿಟ್ಠಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.  ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಾತನಾಡುತ್ತಾ ತಾವು ಶ್ರೀವಿದ್ಯಾಮಾನ್ಯರ ಆಸೆಯಂತೆ ಪಾಜಕದಲ್ಲಿ ಕಟ್ಟಿದ ಈ ವಾಸುದೇವ ಗುರುಕುಲವು ಸಮಾಜಕ್ಕೆ ಅನೇಕ ವಿದ್ವಾಂಸರನ್ನೂ ಪುರೋಹಿತರನ್ನೂ ನೀಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಹೆಚ್ಚಿನ ಶಾಸ್ತ್ರಾಭ್ಯಾಸ ನಡೆಸಿ ಸುಧಾಗ್ರಂಥವನ್ನೂ ಅಧ್ಯಯನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಂತರ್ಜಾತೀಯ ವಿವಾಹದ ಬಗ್ಗೆ ಬೇಡಿಕೆಗಳು ನಮ್ಮಲ್ಲಿ ಬರುತ್ತಿವೆ.ಆದರೆ ಅಂತರ್ಜಾತೀಯ ವಿವಾಹವನ್ನು ಅನುಮೋದಿಸಿದಲ್ಲಿ ಸನಾತನವಾದ ಕುಲಾಚಾರ ಪರಂಪರೆಗಳು ನಷ್ಟವಾಗುವುದರ ಜೊತೆಗೆ ವಿಭಿನ್ನ ಆಹಾರಪರಂಪರೆಯ ಮತ್ತು ಜೀವನಶೈಲಿಯ ತಾಕಲಾಟದಿಂದ ವಿವಾಹವು ಮುರಿದುಬೀಳುವ ಸಾಧ್ಯತೆಯೂ ಅಧಿಕವಾಗಿರುವುದರಿಂದ ನಾವು ಬ್ರಾಹ್ಮಣ್ಯದ ರಕ್ಷಣೆಗಾಗಿ ಹಾಗೂ ಸಾಮಾಜಿಕ ಮೌಲ್ಯಗಳ ಉಳಿವಿಗಾಗಿ ಎಷ್ಟು ಮಾತ್ರಕ್ಕೂ ಅಂತರ್ಜಾತೀಯ ವಿವಾಹವನ್ನು ಒಪ್ಪಲಾರೆವು. ಹಿಂದುತ್ವದ ಉಳಿವಿಗಾಗಿ ಅಸ್ಪೃಶ್ಯತೆಯನ್ನು ದೂರ ಮಾಡಬೇಕು.ನಮ್ಮ ಹಿಂದೂಪರಂಪರೆಯವರೇ ಆದ ದಲಿತರನ್ನು ನಾವು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತೇವೆ. ಅನ್ಯ ಪರಂಪರೆಯ ಕ್ರೈಸ್ತರನ್ನೂ ಮುಸಲ್ಮಾನರನ್ನೂ ನಾವು ಜೊತೆಗೆ ಸೇರಿಸಿಕೊಳ್ಳುತ್ತೇವೆ. ಇದೆಂಥಾ ನ್ಯಾಯ? ಅದಕ್ಕಾಗಿ ಕ್ರೈಸ್ತಮುಸಲ್ಮಾನಬಂಧುಗಳನ್ನು ನಾವು ಎಷ್ಟು ನಮ್ಮ ಜೊತೆಗೆ ಸೇರಿಸಿಕೊಳ್ಳಬಲ್ಲೆವೋ ಅದಕ್ಕೂ ಅಧಿಕವಾಗಿ ,ಕೊನೆಗೆ ಅಷ್ಟಂಶವನ್ನಾದರೂ ಹಿಂದೂದಲಿತರ ಜೊತೆಗೆ ಹೊಂದಿಕೊಳ್ಳುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು. ಹೀಗೆ ” ಹಿಂದುತ್ವದ ರಕ್ಷಣೆಗಾಗಿ ಅಸ್ಪೃಶ್ಯತಾ ನಿವಾರಣೆ ” “ಪರಂಪರೆಯ ಹಾಗೂ ಸಾಮಾಜಿಕ ಮೌಲ್ಯಗಳ ಉಳಿವಿಗಾಗಿ ಅಂತರ್ಜಾತೀಯ ವಿವಾಹದ ನಿರಾಕರಣೆ” ಈ ಎರಡಂಶದ ಕಾರ್ಯವೇ ನಮ್ಮ ಪ್ರಮುಖ ಧ್ಯೇಯವಾಗಿದೆ ಇದನ್ನು ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಉದ್ಘೋಷಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ವೇದಾಭ್ಯಾಸದ ಮಹತ್ವವನ್ನು ವಿವರಿಸುವುದರ ಜೊತೆಗೆ ಗುರುಗಳ ಕಾರುಣ್ಯವನ್ನೂ ಕೊಂಡಾಡಿದರು. ವಿದ್ಯಾರ್ಥಿಗಳ ಪರವಾಗಿ ಕೆ ರಾಘವೇಂದ್ರ ಎಂಬ ವಿದ್ಯಾರ್ಥಿಯೂ,ಅಧ್ಯಾಪಕರಪರವಾಗಿ ವಿ|| ರವಿಕುಮಾರ ಆಚಾರ್ಯರೂ ಮಾತನಾಡಿದರು. ಪ್ರಾಂಶುಪಾಲರಾದ ನಂದಳಿಕೆ ವಿಠ್ಠಲ ಆಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಭಾಗವಹಿಸಿದ ಸಕಲರಿಗೂ ಅನ್ನ ಸಂತರ್ಪಣೆ ನಡೆಯಿತು. ಸುತ್ತ ಮುತ್ತಲ ಊರಿನ ಅನೇಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲರಿಗೂ ತೀರ್ಥಪ್ರಸಾದದ ವ್ಯವಸ್ಥೆಮಾಡಲಾಗಿತ್ತು.

 

QR Code Business Card